ದದ್ದಾಲ -
	ಬ್ಯಾರಿಂಗ್‍ಟೋನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕ್ಯಾರೀಯ ಅರ್ಬೋರಿಯ ಇದರ ಶಾಸ್ತ್ರೀಯ ಹೆಸರು. ಗೌಜಲ್ ಮರ, ಕವುಲುಮರ, ಗುಡ್ಡದ ಇಪ್ಪೆ, ಗೊಂಜಿ, ಮುಂತಾದವು ಪರ್ಯಾಯ ನಾಮಗಳು. ಉತ್ತರ ಭಾರತದಲ್ಲಿ ಸಹ್ಯಾದ್ರಿಯ ಬೆಟ್ಟಗಳಲ್ಲಿ ಈ ಮರ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಲಯ, ಶ್ರೀಲಂಕಾ, ಆಸ್ಟ್ರೇಲಿಯ, ಥೈಲೆಂಡುಗಳಲ್ಲೂ ಕಾಣಸಿಗುತ್ತದೆ. ಇದು 30-60 ಎತ್ತರಕ್ಕೆ ಬೆಲೆಯುವ ಪರ್ಣಪಾತಿ ಮರ. ಇದರ ಚೌಬೀನೆ ಭಾರವಾಗಿಯೂ ದೃಢವಾಗಿಯೂ ಗಟ್ಟಿಯಾಗಿಯೂ ಉಂಟು. ಅದರೆ ಬೇಗ ಸೀಳಿಬಿಡುತ್ತದೆ. ಅಲ್ಲದೆ ಇದನ್ನು ಗರಸದಿಂದ ಕೊಯ್ಯಲು ಕಷ್ಟ. ಇದರಿಂದಾಗಿ ವ್ಯವಸಾಯ ಉಪಕರಣಗಳು, ಮನೆಯ ಕಂಬಗಳು, ತೊಲೆಗಳು, ಹಲಗೆಗಳು, ಒರಟುಬಗೆಯ ಬೀರುಗಳನ್ನು ತಯಾರಿಸಲು ಮಾತ್ರ ಇದನ್ನು ಬಳಸುವರು. ಮರದ ತೊಗಟೆಗೆ ಘಾಟು ವಾಸನೆಯುಂಟು. ಇದರಲ್ಲಿ 8% ಟ್ಯಾನಿನ್ ಇದೆ. ಚರ್ಮವನ್ನು ಹದಗೊಳಿಸುವಲ್ಲಿ ತೊಗಟೆ ಉಪಯುಕ್ತವೆನಿಸಿದೆ. ಅಲ್ಲದೆ ಉಬ್ಬಸ, ಮೂಲವ್ಯಾಧಿ, ತೊನ್ನು ಮತ್ತು ಇತರ ಚರ್ಮವ್ಯಾಧಿಗಳಿಗೆ ಉಪಯೋಗಿಸುವ ಔಷಧಿಯಲ್ಲಿ ತೊಗಟೆಯನ್ನು ಬಳಸಲಾಗುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಉತ್ತರ ಭಾಗಗಳಲ್ಲಿ ಇದರ ಹೂವನ್ನು ಮತ್ತು ಹಸಿರು ತೊಗಟೆಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ, ಕಫ ಶೀತಗಳಿಗೆ ಔಷಧಿಯನ್ನಾಗಿ ಕೊಡುವ ಪದ್ಧತಿ ಉಂಟು. ತೊಗಟೆಯಿಂದ ಕಂದು ಬಣ್ಣದ ಕಾಗದ ಹಾಗೂ ಒರಟು ಹಗ್ಗವನ್ನು ತಯಾರಿಸುವುದಿದೆ.
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ